Chartered Accountant's day July 1
- Get link
- X
- Other Apps
ಚಾರ್ಟರ್ಡ್ ಅಕೌಂಟೆಂಟರುಗಳ ದಿನ
ಜುಲೈ 1ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949ರಂದು ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕ ಪರಿಶೋಧಕರಾಗಿ ಈ ಸಂಸ್ಥೆಯ ಮೂಲಕ ಪರಿಣತಿಯನ್ನು ಸಾಧಿಸಿರುತ್ತಾರೆ. ಈ ರೀತಿ ಪರಿಣತಿ ಸಾಧಿಸಿರುವ ಅತೀ ಹೆಚ್ಚು ಸದಸ್ಯತ್ವ ಸಂಖ್ಯೆ ಹೊಂದಿರುವ ದೃಷ್ಟಿಯಿಂದ ಈ ಐಸಿಎಐ ಸಂಸ್ಥೆಯು ‘ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘ ನಂತರದಲ್ಲಿ ವಿಶ್ವದ ತನ್ನ ಇತರ ಸಮಾನೋದ್ದೇಶಿತ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎಲ್ಲಾ ಭಾರತೀಯ ಸಂಸ್ಥೆಗಳೂ ಖಡ್ಡಾಯವಾಗಿ ಅನುಸರಿಸಬೇಕಾದ ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪತ್ರ ಪರಿಶೋಧನಾ ನೀತಿ ನಿಯಮಗಳನ್ನು ವಿಧಿಸುವ ಅಧಿಕಾರ ಈ ಸಂಸ್ಥೆಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಭಾರತ ಸರ್ಕಾರ, ರಿಸರ್ವ್ ಬ್ಯಾಂಕ್ ಹಾಗೂ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಫ್ ಇಂಡಿಯಾ ಜೊತೆಗಿನ ಅಗತ್ಯ ಸಾಮೀಪ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಚಾರ್ಟರ್ಡ್ ಅಕೌಂಟೆಂಟರುಗಳು ಐಸಿಎಐ ಸಂಸ್ಥೆಯ ನಿಯಮಾವಳಿಗಳಿಗೆ ನೈತಿಕವಾಗಿ ಬದ್ಧತೆ ಹೊಂದಿರುವ ಜವಾಬ್ಧಾರಿಗಳನ್ನು ನಿರ್ವಹಿಸಬೇಕಾಗುತ್ತದೆ.
ಐಸಿಎಐ ಸಂಸ್ಥೆ ‘ಯಾ ಯೇಷು ಸುಪ್ತೇಷು ಜಾಗೃತಿ’ ಎಂಬ ಸಂಸ್ಕೃತ ಕಠೋಪನಿಷತ್ತಿನ ನುಡಿಯನ್ನು ತನ್ನ ಆಶಯವಾಕ್ಯವಾಗಿ ಹೊಂದಿದೆ. ಇದರ ಅರ್ಥ ‘ನಿದ್ರೆಯಲ್ಲೂ ಜಾಗೃತವಾಗಿರುವುದು’. “ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯು ವಿಶ್ವದ ಶ್ರೇಷ್ಠ ಆರ್ಥಿಕ ಸಾಮರ್ಥ್ಯ, ಉತ್ತಮ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಮನೋಭಾವಗಳ ಪ್ರತೀಕತೆ” ಎಂಬ ಧ್ಯೇಯವನ್ನು ಬಿಂಬಿಸುತ್ತದೆ. ಹೀಗೆ ಅತ್ಯುನ್ನತ ಧ್ಯೇಯ ಸಾಧನೆಗಳನ್ನು ಅಪೇಕ್ಷಿಸುವ ಈ ವೃತ್ತಿಗೆ ಆಗಮಿಸುವವರೆಲ್ಲರೂ ಕಠಿಣತಮ ಪರೀಕ್ಷೆಗಳಲ್ಲಿ ಹಾದುಹೋಗಿ ಉನ್ನತ ಬುದ್ಧಿಮತ್ತೆಯನ್ನು ಬಿಂಬಿಸುವಂತಹ ಶಕ್ತಿಯನ್ನು ಗಳಿಸಿಕೊಂಡಿರುವುದು ಅಗತ್ಯ ಎಂಬುದು ಸರ್ವೇಸಾಮಾನ್ಯವಾಗಿ ಕಾಣಬರುವ ಅಂಶ. ಇಲ್ಲಿ ಸಾಗಲು ಹಾದುಹೋಗಬೇಕಿರುವ ಬಹಳಷ್ಟು ಸೋಲಿನ ಸಾಧ್ಯತೆಗಳ ಭೀತಿಯಿಂದ ಬಹಳಷ್ಟು ಜನ ಈ ವೃತ್ತಿ ಸಂಬಂಧಿತ ಪರೀಕ್ಷೆಗಳಿಗೆ ಹೆದರಿ ದೂರ ಉಳಿಯುತ್ತಾರಾದರೂ ಅನೇಕ ಬುದ್ಧಿವಂತ ಜನಾಂಗ ಸುಲಲಿತವಾಗಿ ಈ ಪರೀಕ್ಷೆಗಳನ್ನು ದಾಟುವುದು ಹಾಗೂ ಹಲವಾರು ಮಂದಿ ತಮ್ಮ ಭಗೀರಥ ಪ್ರಯತ್ನಗಳ ಮೂಲಕ ಈ ವೃತ್ತಿಗೆ ನಿರಂತರವಾಗಿ ಬರುತ್ತಿರುವುದನ್ನು ಸಹಾ ನಾವು ಕಾಣುತ್ತಿದ್ದೇವೆ. ದೇಶದ ಆರೋಗ್ಯಕರ ಆರ್ಥಿಕ ಬೆಳವಣಿಗೆ ಸಹಾ ಇತರ ವೃತಿಗಳಂತೆ ಈ ವೃತ್ತಿಗೂ ಸಮರ್ಥರು ಅವಶ್ಯಕ ಎಂಬ ಬಗ್ಗೆ ಎರಡನೇ ಮಾತೇ ಇಲ್ಲ. ಮತ್ತೊಂದು ನಿಟ್ಟಿನಲ್ಲಿ ಈ ವೃತ್ತಿಗೆ ಬಂದಿರುವ ಬಹಳ ವೃತ್ತಿಪರರು ತಮ್ಮ ವೃತ್ತಿ ಅಪೇಕ್ಷಿಸುವ ಅತ್ಯಂತ ಹೆಚ್ಚಿನ ಜವಾಬ್ದಾರಿ ಹಾಗೂ ಕಾರ್ಯಬಾಹುಳ್ಯದ ನಿಟ್ಟಿನಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಹುದ್ದೆಗೆ ವಿನಿಯೋಗಿಸುವುದು ಕೂಡಾ ಬಹಳಷ್ಟು ವೇಳೆ ಸಾಮಾನ್ಯವೆನಿಸುವಂತಹ ಅಂಶವಾಗಿದೆ. ಹೀಗೆ ಕಷ್ಟಪಟ್ಟು ಚಾರ್ಟರ್ಡ್ ಅಕೌಂಟೆಂಟ್ಗಳಾಗಿ ತಮ್ಮ ವೃತ್ತಿಗೆ ನಿಷ್ಠರಾಗಿ ಭಾರತೀಯ ಆರ್ಥಿಕ ವ್ಯವಸ್ಥೆಗೆ ಮತ್ತು ಭಾರತೀಯ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಸಕಲರಿಗೂ ಶುಭಾಶಯಗಳನ್ನು ಹೇಳೋಣ.
On Chartered Accountants’ Day
- Get link
- X
- Other Apps
ಕಾಮೆಂಟ್ ಮಾಡಿ